ಬಾಷ್ಪ ವಿಸರ್ಜನೆ

ಸಸ್ಯದೇಹದಿಂದ ಹೆಚ್ಚಿಗೆ ಇರತಕ್ಕ ನೀರಿನಭಾಗ ಆವಿಯ ರೂಪದಲ್ಲಿ ಹೊರಬೀಳುವ ಕ್ರಿಯೆ (ಟ್ರಾನ್ಸ್‍ಪಿರೇಷನ್). ಸಸ್ಯ ಜೀವನಕ್ಕೆ ನೀರು ಅಗತ್ಯ ವಸ್ತು. ಆದರೆ ಅದರ ಆವಶ್ಯಕತೆ ಸಸ್ಯ ವೈವಿಧ್ಯಕ್ಕನುಗುಣವಾಗಿ ಹೆಚ್ಚು ಕಡಿಮೆಯಾಗುತ್ತದೆ. ನೀರಿನ ಅಗತ್ಯ ಎಲ್ಲ ಸಸ್ಯಗಳಿಗೆ ಇದೆ. ಆದರೆ ತಾವು ಹೀರಿದ ನೀರನ್ನು ಪೂರ್ಣವಾಗಿ ಬಳಸುವ ಸಾಮಥ್ರ್ಯ ಹಲವು ಮರುಭೂಮಿ ಸಸ್ಯಗಳಿಗೆ ವಿನಾ ಉಳಿದವಕ್ಕಿಲ್ಲ. ಹೀಗೆ ಸಸ್ಯ ದೇಹದಲ್ಲಿ ಹೆಚ್ಚಾಗಿ ಉಳಿದ ನೀರು ಸಾಮಾನ್ಯವಾಗಿ ಆವಿಯ ರೂಪದಲ್ಲಿ ಹೊರಬೀಳುತ್ತದೆ. ಈ ಕಾರ್ಯ ಸಸ್ಯದ ಯಾವ ಭಾಗದಿಂದಲಾದರೂ ಜರಗಬಹುದು. ಆದರೆ ಹೆಚ್ಚಿನ ವಿಸರ್ಜನೆ ಎಲೆಗಳ ಮೂಲಕವೇ ಜರಗುವುದಾಗಿದೆ. ಇದು ಎರಡು ವಿಧದಲ್ಲಿ ಆಗುತ್ತದೆ. ಎಲೆಗಳ ತಳಭಾಗದಲ್ಲಿರುವ ಸೂಕ್ಷ್ಮರಂಧ್ರಗಳ (ಸ್ಟೋಮಟ) ಮುಖಾಂತರ ಆಗುವ ವಿಸರ್ಜನೆ ಒಂದು ವಿಧ ; ಹೊರಚರ್ಮದ (ಎಪಿಡರ್ಮಿಸ್) ಮೂಲಕ ಆಗುವುದು ಇನ್ನೊಂದು ವಿಧ. ಹೊರಚರ್ಮ ಮುಖೇನ ವಿಸರ್ಜಿತವಾಗುವ ನೀರಿನ ಮೊತ್ತ ಅತ್ಯಲ್ಪ. ಸೂಕ್ಷ್ಮರಂಧ್ರಗಳು ಸ್ಥಿತವಾಗಿರುವುದು ಎಲೆಗಳ ತಳಭಾಗದಲ್ಲೇ ಆದರೂ ಹಲವಾರು ಮೂಲಿಕೆ ಸಸ್ಯಗಳ ಕಾಂಡಗಳಲ್ಲೂ ಹೂವು ಹಣ್ಣುಗಳಲ್ಲೂ ಇರುವುದುಂಟು. ಹಲವು ತೆರನಗಿಡಗಳ ಹಣ್ಣು ಮತ್ತು ಕಾಂಡದ ತೊಗಟೆಗಳಲ್ಲೂ ಸಣ್ಣ ರಂಧ್ರಗಳಿದ್ದು, ಅವುಗಳಿಂದಲೂ ಸ್ವಲ್ಪಭಾಗ ನೀರು ಹೊರಬೀಳುತ್ತದೆ. ಆದರೂ 90% ಭಾಗದಷ್ಟು ಭಾಷ್ಪ ವಿಸರ್ಜನೆ ನಡೆಯುವುದು ಸಸ್ಯದ ಎಲೆಗಳಲ್ಲಿಯ ಸೂಕ್ಷ್ಮರಂಧ್ರಗಳ ಮೂಲಕವೇ. ಒಂದು ಸೂರ್ಯಕಾಂತಿ ಗಿಡ ಸಾಮಾನ್ಯ ವಾತಾವರಣದಲ್ಲಿ ದಿನ ಒಂದಕ್ಕೆ 187.5 ಮಿಲೀ ನೀರನ್ನು ಈ ಮೂಲಕ ಕಳೆದುಕೊಳ್ಳುತ್ತದೆ.

ಎಲೆಗಳ ಮೇಲ್ಭಾಗದಲ್ಲೂ ತಳಭಾಗದಲ್ಲೂ ಎಪಿಡರ್ಮಿಸಿನ ಆವರಣ ಉಂಟಷ್ಟೆ. ತಳಭಾಗದ ಚರ್ಮದಲ್ಲಿ ಸೂಕ್ಷ್ಮರಂಧ್ರಗಳುಂಟು. ಇವನ್ನು ರಕ್ಷಾಕೋಶಗಳು (ಗಾರ್ಡ್‍ಸೆಲ್ಸ್) ಸುತ್ತಿವೆ. ಎಲೆಯ ಎರಡು ಹೊದಿಕೆಗಳ ನಡುವಣ ಪ್ರದೇಶದಲ್ಲಿ ಜೀವಕೋಶಗಳೂ ವಾಯು ತುಂಬಿದ ಅವಕಾಶಗಳೂ ಇವೆ. ಮೇಲ್ಭಾಗದ ಹೊರಚರ್ಮದ ತಳದಲ್ಲಿ ಹರಿತ್ತು ತುಂಬಿರುವ ಮತ್ತು ಒಂದಕ್ಕೊಂದು ಆತುಕೊಂಡಿರುವ ನೀಳಕೋಶಗಳ ಸಾಲುಗಳಿವೆ. ಇದರ ಕೆಳಗೆ ಸರಳವಾಗಿ ಹರಡಿದಂತಿರುವ ಅನಿರ್ದಿಷ್ಟ ಆಕಾರದ ಕೋಶಗಳುಂಟು. ಇವುಗಳ ಮಧ್ಯೆ ವಾಯುತುಂಬಲು ಅವಕಾಶವಿರುವಂತೆ ಬಿಡುವು ಪ್ರದೇಶಗಳೂ ಎಲೆಯ ಮಧ್ಯಭಾಗದಲ್ಲಿ ನೀರನ್ನು ಒದಗಿಸುವ ನಾಳ ಸಮೂಹವೂ ಇವೆ. ಹೊರಗಿನ ಗಾಳಿ ಸೂಕ್ಷ್ಮರಂಧ್ರಗಳ ಮೂಲಕ ಎಲೆಯನ್ನು ಹೊಕ್ಕು ಜೀವಕೋಶಗಳ ಮಧ್ಯಪ್ರದೇಶಗಳಲ್ಲಿ ತುಂಬುತ್ತದೆ. ಈ ಬಿಡುವು ಪ್ರದೇಶಗಳಿಗೆ ಪರಸ್ಪರ ಸಂಬಂಧ ಇರುವುದರಿಂದ ವಾಯುಒಳಗೆ ಚಲಿಸಿ ಎಲ್ಲೆಡೆ ಹರಡಿಕೊಳ್ಳಲು ಅನುಕೂಲವುಂಟು. ಬೇರುಗಳಿಂದ ಬಂದ ನೀರು ನಾಳಗಳ ಮೂಲಕ ಎಲೆಗಳಿಗೆ ಹರಿದು ಕೋಶಗಳ ಸೂಕ್ಷ್ಮಕುಹರಗಗಳನ್ನು ತುಂಬುತ್ತದೆ. ಕೋಶ-ಮಧ್ಯ ಪ್ರದೇಶದಲ್ಲಿ ಸೇರಿದ ವಾಯುವಿನಿಂದ ನೀರು ಆವಿಯಾಗುತ್ತದೆ. ತರುವಾಯ ಈ ಆವಿ ಸೂಕ್ಷ್ಮರಂಧ್ರಗಳ ಮೂಲಕ ಹೊರಬೀಳುತ್ತದೆ. ಇದರ ತೀವ್ರತೆ ಅಥವಾ ವೇಗ ಹೊರಾವರಣದ ತೇವ ಒತ್ತಡಗಳನ್ನನುಸರಿಸುತ್ತವೆ. ಒಳಗಿನ ಆವಿಯ ಒತ್ತಡ ಹೊರಾವರಣದ ತೇವದ ಒತ್ತಡಕ್ಕಿಂತೆ ಹೆಚ್ಚಾಗಿದ್ದಲ್ಲಿ ನೀರು ಹೆಚ್ಚಾಗಿ ಹೊರಬೀಳುತ್ತದೆ ; ಕಡಿಮೆಯಾದಲ್ಲಿ ಕಡಿಮೆ ಮೊತ್ತದಲ್ಲಿ ಬರುತ್ತವೆ. ಒಟ್ಟಿನಲ್ಲಿ ಇದು ವಿಸರಣತತ್ತ್ವವನ್ನು ಆಧರಿಸಿ ನಡೆಯುವ ವಿದ್ಯಮಾನ.

ಬಾಷ್ಪ ವಿಸರ್ಜನೆಯಲ್ಲಿ ಸೂಕ್ಷ್ಮರಂಧ್ರಗಳು ಮುಖ್ಯಪಾತ್ರ ವಹಿಸುತ್ತವೆ. ಅವು ತೆರೆದಿರುವಾಗ ಹೊರಾವರಣದಲ್ಲಿಯ ವಾಯುವಿಗೂ ಎಲೆಯೊಳಗಿನ ಕೋಶಗಳ ಮಧ್ಯ ಪ್ರದೇಶದಲ್ಲಿಯ ವಾಯುವಿಗೂ ಸಂಪರ್ಕವೇರ್ಪಟ್ಟರೆ ಆವಿ, ಕಾರ್ಬನ್ ಡೈಆಕ್ಸೈಡ್, ಆಕ್ಸಿಜನ್ ಮತ್ತಿತರ ಅನಿಲಗಳ ವಿನಿಮಯದ ನಡೆಯುತ್ತದೆ. ಅವು ಮುಚ್ಚಿಕೊಂಡಲ್ಲಿ ವಿನಿಮಯಕ್ಕೆ ಬಹಳ ಮಟ್ಟಿಗೆ ತಡೆಯುಂಟಾಗುತ್ತದೆ.

ಪ್ರತಿಯೊಂದು ಸೂಕ್ಷ್ಮರಂಧ್ರವನ್ನು ಅದರ ಎರಡೂ ಕಡೆಗಳಲ್ಲೂ ಅರ್ಧಚಂದ್ರಾಕೃತಿಯ ಹೊರಚರ್ಮದ ಕೋಶಗಳು ರಕ್ಷಿಸುತ್ತವೆ. ಇವೇ ರಕ್ಷಕ ಕೋಶಗಳ (ಗಾರ್ಡ್ ಸೆಲ್ಸ್). ಇವು ಅವರೆಕಾಳಿನ ಆಕಾರದ ಕೋಶಗಳು ಇವುಗಳಲ್ಲಿ ಹರಿತ್ತು ಉಂಟು. ಹಲವು ಸಸ್ಯಗಳಲ್ಲಿ ರಕ್ಷಕ ಕೋಶಗಳ ಪಕ್ಕದ ಕೋಶಗ	ಳು.ಕೂಡ ಮಾರ್ಪಾಟಾಗಿದ್ದು ಸಹಾಯಕ ಕೋಶಗಳೆನಿಸಿಕೊಳ್ಳುವುವು. ಬಹುಪಾಲು ಸಸ್ಯಗಳಲ್ಲಿ ಹೊರಚರ್ಮದ ಸಮತಲಕ್ಕೆ ಹೊಂದಿಕೊಂಡಂತಿದ್ದರೆ ಅನೇಕ ನಗ್ನಬೀಜಸಸ್ಯಗಳಲ್ಲಿ ಎಲೆಯ ಹೊರಚರ್ಮದಲ್ಲಿರುವ ಗುಳಿಗಳಲ್ಲಿ ಹುದುಗಿರುವುವು. ಸೂಕ್ಷ್ಮರಂಧ್ರಗಳು ತಮ್ಮ ಆಕಾರ, ಗಾತ್ರ ಹಾಗೂ ಸಂಖ್ಯೆಗಳಲ್ಲಿ ಸಸ್ಯಪ್ರಭೇದಗಳಿಗೆ ಅನುಸಾರವಾಗಿ ವ್ಯತ್ಯಾಸ ತೋರುವುವು. ಇವುಗಳ ಸಾಮಾನ್ಯ ತಲಾ ವಿಸ್ತೀರ್ಣ 31( x 12( (( = ಒಂದು ಮೈಕ್ರಾನ್ = ). ಒಂದು ಚದರ ಸೆಂಟಿಮೀಟರ್ ವಿಸ್ತೀರ್ಣದಲ್ಲಿ ಹಲವು ಸಾವಿರದಿಂದ ಹಿಡಿದು ಹಲವು ಲಕ್ಷ ರಂಧ್ರಗಳಿರುವುವು. ಎಲೆಯ ಮೇಲ್ಭಾಗ ತಳಭಾಗಗಳೆರಡರಲ್ಲೂ ರಂಧ್ರಗಳು ಇರುವುದಾದರೂ ಮೇಲ್ಭಾಗದಲ್ಲಿ ಇರುವವುಗಳ ಸಂಖ್ಯೆ ಹೆಚ್ಚು. ಕೆಲವು ತೆರನ ಮರಗÀಳ ಎಲೆಗಳಲ್ಲಿ ಬರಿಯ ತಳಭಾಗದಲ್ಲೂ ಜಲಸಸ್ಯಗಳ ಎಲೆಗಳಲ್ಲಿ ಬರಿಯ ಮೇಲ್ಭಾಗದಲ್ಲೂ ಕಾಣಬರುವುದುಂಟು.

ಪೂರ್ಣವಾಗಿ ತೆರೆದಿರುವ ಎಲ್ಲ ಸೂಕ್ಷ್ಮರಂಧ್ರಗಳ ಒಟ್ಟು ವಿಸ್ತೀರ್ಣ, ಎಲೆಯ ವಿಸ್ತೀರ್ಣದ 1% ರಿಂದ 2% ಭಾಗ ಮಾತ್ರ ಆದರೂ ಇವುಗಳ ಮೂಲಕ ನಿರ್ವಹಣವಾಗುವ ಅನಿಲಗಳ ವಿನಿಮಯ, ಇಷ್ಟೇ ವಿಸ್ತೀರ್ಣದ ಮುಕ್ತನೀರಿನಿಂದ ಆಗುವುದಕ್ಕಿಂತ 50%-60% ಭಾಗದಷ್ಟು ಹೆಚ್ಚಾಗಿರುವುದೆ. ಅನಿಲಗಳ ಮಿಶ್ರಣದ ತತ್ತ್ವ ಅನುಸರಿಸುವುದರಿಂದ ಇದು ಸಾಧ್ಯವಾಗುತ್ತದೆ. ಉದಾಹರಣೆಗೆ ಅಡಚಣೆಯಿಲ್ಲದ ರಂಧ್ರಗಳಿಗಿಂತ ಸೂಕ್ಷ್ಮ ತೂತುಗಳ ಜರಡಿಯ (ಸೀವ್) ಮೂಲಕ ಹೆಚ್ಚಿನ ಗತಿಯಲ್ಲಿ ಕಾರ್ಬನ್ ಡೈ ಆಕ್ಸೈಡ್ ಹಾದುಹೋಗುತ್ತದೆ. ಆವಿಗೆ ಕೂಡ ಈ ತತ್ತ್ವವೇ ಅನ್ವಯಿಸುತ್ತದೆ. ಅಲ್ಲದೆ ರಂಧ್ರಗಳ ಮೂಲಕ ಆವಿ ಹೊರಬೀಳುವಾಗ ರಂಧ್ರದ ವಿಸ್ತೀರ್ಣ ಮುಖ್ಯವಲ್ಲ. ಅದು ರಂಧ್ರದ ಸುತ್ತಳತೆಗೆ ಅನುಗುಣವಾಗಿರುತ್ತದೆ. ಇದರಿಂದ ರಂಧ್ರ ಸೂಕ್ಷ್ಮಗಾತ್ರದ್ದಾದಷ್ಟೂ ಇವುಗಳ ಒಟ್ಟು ಸಂಖ್ಯೆಯ ಸುತ್ತಳತೆಯ ಆಧಾರದಿಂದ ಆಗುವ ಆವಿ ವಿಸರ್ಜನೆಯ ಪ್ರಮಾಣ ಹೆಚ್ಚು. ಅನಿಲಗಳ ವಿನಿಮಯದಲ್ಲಿ ಸೂಕ್ಷ್ಮ ರಂಧ್ರಗಳು ಪೂರ್ಣವಾಗಿ ತೆರೆದಿದ್ದರಾಗಲಿ ಅಥವಾ ಸ್ವಲ್ಪ ಮುಚ್ಚಿದ್ದರಾಗಲಿ ಇವುಗಳ ಸುತ್ತಳತೆ ಒಂದೇ ಆಗಿದ್ದಲ್ಲಿ ಆವಿವಿಸರ್ಜನೆಯ ಮೊತ್ತ ಕಡಿಮೆಯಾಗುವುದಿಲ್ಲ ಎಲೆಗಳಲ್ಲಿಯೂ ಸೂಕ್ಷ್ಮ ರಂಧ್ರಗಳು ಅಸಂಖ್ಯಾತ ಸಂಖ್ಯೆಯಲ್ಲಿದ್ದು ಒಂದಕ್ಕೊಂದು ಜೋಡಿಸಿದಂತಿರುವುದರಿಂದ ವಿಸರ್ಜನಕಾರ್ಯ ಹೆಚ್ಚು ವೇಗವಾಗಿ ನಡೆಯುತ್ತದೆ.

ಸೂಕ್ಷ್ಮರಂಧ್ರಗಳ ಅಂತರವೂ ಇದಕ್ಕೆ ಸಹಾಯಕ. ರಂಧ್ರಗಳ ನಡುವಣ ಅಂತರ ಹೆಚ್ಚಾದಲ್ಲಿ ರಂಧ್ರದ ಮೂಲಕ ಆವಿ ಬೆರಕೆಯ ಒತ್ತಡ ಹೆಚ್ಚುತ್ತದೆ. ಅವು ಬಲು ಹತ್ತಿರವಾಗಿದ್ದಲ್ಲಿ ಬೆರಕೆ ಆಗುವ ಅನಿಲಗಳೂ ಹಂಚಿದಂತೆ ಹರಡಿ, ಪ್ರತಿರಂಧ್ರದ ಮೂಲಕ ಬೆರಕೆ ಆಗುವ ಅನಿಲಗಳ ಒತ್ತಡ ಕಡಿಮೆ ಆಗುತ್ತದೆ.

ಅಂತೆಯೇ ಎಲೆಗಳ ಸುತ್ತ ಹೆಚ್ಚಿನ ಗಾಳಿಯಿದ್ದಲ್ಲಿ ಎಲೆಗಳ ಚಲನೆ ಅಧಿಕವಾಗುತ್ತದೆ. ಆಗ ಎಲೆಗಳ ಮೇಲಿನ ಗಾಳಿಯ ಒತ್ತಡ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಒಳಗಿನ ಒತ್ತಡ ಹೆಚ್ಚಾದಲ್ಲಿ ಒಳಗಿನ ಅನಿಲಗಳು ಹೊರಬರುತ್ತವೆ ಕಡಿಮೆಯಾದಲ್ಲಿ ಹೊರಗಿನ ಗಾಳಿ ಒಮ್ಮೆಗೇ ಒಳನುಗ್ಗುತ್ತದೆ. ಹೆಚ್ಚು ಬಿಸಿಲಿರುವಾಗಲೂ ಹೀಗೆಯೇ ಆಗುವುದುಂಟು. ಎಲೆಯಲ್ಲಿಯ ಉಷ್ಣತೆ ಹೆಚ್ಚಾದಾಗ ಒಳಗಿನ ಅನಿಲಗಳು ಹೊರಬೀಳುತ್ತವೆ. ಎಲೆ ತಂಪಾದಾಗ ಹೊರಗಿನವು ಒಳನುಗ್ಗುತ್ತವೆ.

ರಕ್ಷಕಕೋಶಗಳ ವ್ಯಾಕೋಚನ ಮತ್ತು ಸಂಕೋಚನ ರಂಧ್ರಗಳ ತೆರವು ಅಥವಾ ಮುಚ್ಚುವಿಕೆಗೆ ಕಾರಣ. ವ್ಯಾಕೋಚಿಸಿದಷ್ಟೋ. ತೆರವು ಹೆಚ್ಚು. ಸಂಕೋಚಿಸಿದಷ್ಟೂ ಕಡಿಮೆ. ಹಲವು ಬಗೆಯ ರಕ್ಷಕಕೋಶಗಳಲ್ಲಿ ಅವುಗಳ ಹೊರಭಿತ್ತಿ ತೆಳುವಾಗಿದ್ದು, ರಂಧ್ರದ ಕಡೆ ಮಂದವಾಗಿರುತ್ತದೆ. ನೀರಿನ ಒತ್ತಡದಿಂದ ಕೋಶ ವ್ಯಾಕೋಚಿಸಿದಾಗ ತೆಳುಪೊರೆಯ ಭಾಗ ಹೊರಚರ್ಮದ ಕೋಶದ ಮೇಲೆ ಒತ್ತಡ ಬೀರುತ್ತದೆ. ಆಗ ಮಂದವಾದ ಪೊರೆ ಒಳಕ್ಕೆ ಎಳೆಯಲ್ಪಟ್ಟು ರಂಧ್ರದಲ್ಲಿ ತೆರವು ಉಂಟಾಗುತ್ತದೆ. ಎಲ್ಲ ಸೂಕ್ಷ್ಮರಂಧ್ರಗಳೂ ಈ ವಿಧಾನದಲ್ಲಿ ಕೆಲಸ ಮಾಡುತ್ತವೆ.

ಸೂಕ್ಷ್ಮರಂಧ್ರಗಳ ತೆರವು ಮತ್ತು ಮುಚ್ಚುವಿಕೆ ಬೆಳಕು, ಎಲೆಯ ಅಂತರಿಕ ನೀರಿನ ವ್ಯವಸ್ಥೆ ಮತ್ತು ಉಷ್ಣತೆಗಳನ್ನು ಅವಲಂಬಿಸಿವೆ. ಇತರ ಅಂಶಗಳು ಗೌಣವಾಗಿದ್ದಲ್ಲಿ ಸಾಮಾನ್ಯವಾಗಿ ಸೂಕ್ಷ್ಮರಂಧ್ರಗಳು ಬೆಳಕು ಇರುವಾಗ (ಹಗಲಿನಲ್ಲಿ) ತೆರೆದಿದ್ದು, ಇಲ್ಲದಿದ್ದಾಗ (ರಾತ್ರಿವೇಳೆ) ಮುಚ್ಚಿಕೊಂಡಿರುವುವು.

ಬೆಳಕುಹೆಚ್ಚಾದಾಗ ರಕ್ಷಕಕೋಶದಲ್ಲಿಯ ಹೈಡ್ರೊಜನ್ ಅಯಾನುಗಳ ಸಾಂದ್ರೀಕರಣ ಕಡಿಮೆ ಆಗುತ್ತದೆ. ಇದರಿಂದ ಅಲ್ಲಿ ಶೇಖರವಾಗಿರುವ ವಿಲೀನವಾಗುದ ಪಿಷ್ಠಾಂಶ ಆ ಜೀವಕೋಶದಲ್ಲಿ ಫಾಸ್‍ಫಾರಿಲೇಸ್ ಎಂಬ ರಾಸಾಯನಿಕ ಕಿಣ್ವದ ಪ್ರಭಾವದಿಂದ ಸುಲಭವಾಗಿ ವಿಲೀನವಾಗುವ ಗ್ಲೂಕೋಸ್-1-ಫಾಸ್ಫೇಟ್ ಎಂಬ ಸಕ್ಕರೆ ಆಗುತ್ತದೆ. ವಿಲೀನವಾಗಬಲ್ಲ ಸಕ್ಕರೆಯ ಅಂಶ ಕೋಶದಲ್ಲಿ ಹೆಚ್ಚಾದಾಗ ಅದರ ಸೂಕ್ಷ್ಮಾಭಿಸರಣ ಸಾಮಥ್ರ್ಯ ಹೆಚ್ಚುತ್ತದೆ. ಅದು ಕಡಿಮೆಯಾದಲ್ಲಿ ಸಹಜವಾಗಿ ಕಡಿಮೆ ಆಗುತ್ತದೆ. ಸೂಕ್ಷ್ಮಾಭಿಸರಣ ಸಾಮರ್ಥ ಹೆಚ್ಚಾದಾಗ, ಪಕ್ಕದ ಕೋಶಗಳಿಂದ ನೀರು ಕೋಶದೊಳಗೆ ಹರಿದು ತುಂಬಿ ಅದು ಉಬ್ಬುತ್ತದೆ. ಈ ಉಬ್ಬುವಿಕೆಯಿಂದ ತೆಳ್ಳಗಿನ ಪೊರೆ ಪಕ್ಕದ ಹೊರಚರ್ಮದ ಕೋಶಗಳ ಮೇಲೆ ಒತ್ತಿ, ಸೂಕ್ಷ್ಮರಂಧ್ರದ ಭಾಗದಲ್ಲಿಯ ಮಂದಪೊರೆ ಒಳಸೆಳೆಯಲು ಸಹಾಯಕವಾಗುತ್ತದೆ. ಇದರಿಂದಾಗಿ ಮೊದಲು ವಿವರಿಸಿದಂತೆ ರಂಧ್ರ ತೆರೆಯುತ್ತದೆ. ಈ ತೆರೆಯುವಿಕೆ ಬೆಳಕಿನ ತೀಕ್ಷ್ಣತೆಯನ್ನು ಅನುಸರಿಸುವುದರಿಂದ, ಎಷ್ಟರಮಟ್ಟಿಗೆ ಬೆಳಕಿನ ಪ್ರಭಾವವಿದೆಯೋ ರಂಧ್ರ ಅಷ್ಟೊ ಅಗಲವಾಗಿ ತೆರೆಯುತ್ತಿದೆ. ರಾತ್ರಿ ಸಮಯದಲ್ಲಿ ಇದಕ್ಕೆ ವ್ಯತಿರಿಕ್ತ ಸರಣಿ ಏರ್ಪಟ್ಟು, ರಕ್ಷಕ ಕೋಶಗಳ ನೀರು ಹೊರಹೋಗಿ ಅವು ಸಂಕೋಚಿಸುವುದರಿಂದ ರಂಧ್ರ ಮುಚ್ಚುವಂತಾಗುತ್ತದೆ.

ಹಗಲಿನಲ್ಲಿ ಕೂಡ ಸೂಕ್ಷ್ಮರಂಧ್ರಗಳ ತೆರವು ಒಂದೇ ರೀತಿಯಾಗಿರುವುದಿಲ್ಲ, ಬಿಸಿಲು ಹೆಚ್ಚಾಗಿದ್ದಾಗ ಅಗಲವಾಗಿಯೂ ಮೋಡ ಕವಿದಾಗ ಅಥವಾ ನೆರಳು ಬಂದಾಗ ಕಿರಿದಾಗಿಯೂ ಇವು ತೆರೆಯುವುದನ್ನು ಕಾಣಬಹುದು. ಉದಾಹರಣೆಗೆ ಬೇಸಗೆಯಲ್ಲಿ ಸಸ್ಯಗಳಲ್ಲಿ ಕೆಲವು ವೇಳೆ ನೀರು ಪೂರ್ಣಮೊತ್ತದಲ್ಲಿ ಇರುವುದಿಲ್ಲ. ಆಗಲೂ ಎಲ್ಲ ಕೋಶಗಳಲ್ಲಿಯ ನೀರಿನಂಶ ಕಡಿಮೆಯಾಗದಿದ್ದರೂ ಸರಾಸರಿಯಾಗಿ ಎಲ್ಲದರಲ್ಲೂ ಸ್ವಲ್ಪ ಕಡಿಮೆ ಇರುತ್ತದೆ. ನೀರಿನ ಕೊರತೆ ಹೆಚ್ಚಾದಾಗ ಎಲ್ಲ ಕೋಶಗಳೂ ಸಡಿಲಬಿದ್ದು ಗಿಡ ಬಾಡುತ್ತದೆ. ಬಾಡುವುದಕ್ಕೆ ಪೂರ್ವಭಾವಿಯಾಗಿ ನೀರಿನ ಈ ಕೊರತೆಗೆ ಪ್ರಥಮಾವಸ್ಥೆಯ ಬಾಡುವಿಕೆ (ಇನ್‍ಸಿಪಿಯೆಂಟ್ ವಿಲ್ಟಿಂಗ್) ಎಂದು ಹೆಸರು. ಈ ಸಂದರ್ಭಗಳಲ್ಲಿ ರಕ್ಷಕ ಕೋಶಗಳಿಂದ ಪಕ್ಕದ ಇತರ ಕೋಶಗಳಿಗೆ ನೀರು ಹರಿಯುವುದರಿಂದ ರಕ್ಷಕ ಕೋಶಗಳ ವ್ಯಾಕೋಚನ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸೂಕ್ಷ್ಮರಂಧ್ರಗಳು ಮುಚ್ಚಿರುತ್ತವೆ. ಹಾಗೂ ನೀರು ಕಡಿಮೆಯಾದಾಗ ಸುಲಭವಾಗಿ ವಿಲೀನವಾಗುವ ಸಕ್ಕರೆ ಮೊದಲಾದವು ಪುನಃ ವಿಲೀನವಾಗದ ರೂಪ ತಳೆಯುವುವು. ಬೆಳಕು ಮತ್ತು ಉಷ್ಣತೆ ಹೆಚ್ಚಾಗಿದ್ದರೂ ಎಲೆಗಳ ಕೋಶಗಳಲ್ಲಿ ಸಾಕಷ್ಟು ನೀರು ತುಂಬಿರದಿದ್ದರೆ ಸೂಕ್ಷ್ಮರಂಧ್ರಗಳು ತೆರೆಯಲಾರವು.
ಬೆಳಕು ಮತ್ತು ನೀರಿನ ಅಂಶಗಳು ಸ್ಥಿರವಾಗಿದ್ದಲ್ಲಿ ಉಷ್ಣತೆಯೂ ಸೂಕ್ಷ್ಮರಂಧ್ರಗಳ ತೆರವಿಗೆ ಸ್ವಲ್ಪಮಟ್ಟಿಗೆ ಸಹಾಯಕವಾಗುತ್ತದೆ. ಉಷ್ಣತೆ ಅತಿ ಕಡಿಮೆ ಅಥವಾ ಅತಿ ಹೆಚ್ಚು ಆಗಿದ್ದರೆ ಕೂಡ ರಂಧ್ರಗಳು ತೆರೆಯುವುದಿಲ್ಲ. ಮಧ್ಯಸ್ಥಿತಿಯಲ್ಲಿ ಮಾತ್ರ ಈ ಪ್ರಭಾವ ಕಂಡುಬರುತ್ತದೆ. ರಾತ್ರಿವೇಳೆಯಲ್ಲಿ ಉಷ್ಣತೆ ಹೆಚ್ಚಾಗಿದ್ದರೆ. ಕೆಲವು ಪ್ರಭೇದಗಳ ಸೂಕ್ಷ್ಮರಂಧ್ರಗಳು ತೆರೆದಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ನೀರಿನ ಪೂರೈಕೆ, ಬೆಳಕು ಮತ್ತು ಉಷ್ಣತೆಗಳು ಸಮರ್ಪಕವಾಗಿದ್ದಲ್ಲಿ, ಸೂಕ್ಷ್ಮರಂಧ್ರಗಳು ಬೆಳಗ್ಗೆ ತೆರೆದುಕೊಂಡು ಸಂಜೆಯ ತನಕ ಹಾಗೇ ಉಳಿಯುತ್ತವೆ. ಮಧ್ಯಾಹ್ನದ ಸಮಯ ಅವುಗಳಲ್ಲಿ ಅನಿಲ ವಿನಿಮಯ ಬಿರುಸಾಗಿರುತ್ತದೆ. ತೆರೆಯುವುದು ಶೀಘ್ರಗತಿಯಲ್ಲಿ ಆದರೆ ಮುಚ್ಚುವಿಕೆ ನಿಧಾನ, ತೆರೆಯುವ-ಮುಚ್ಚುವ ಕಾರ್ಯನಿರ್ವಹಣೆಯಲ್ಲಿ ನೀರಿನ ಅಂಶ ಮುಖ್ಯವಾದ್ದರಿಂದ ಮಧ್ಯಾಹ್ನದ ತರುವಾಯ ಅವು ನಿಧಾನವಾಗಿ ಮುಚ್ಚಲಾರಂಭಿಸಿ, ಸಂಜೆಯವೇಳೆಗೆ ಪೂರ್ಣವಾಗಿ ಮುಚ್ಚುತ್ತವೆ. ರಾತ್ರಿ ಸಾಮಾನ್ಯವಾಗಿ ಅವು ಮುಚ್ಚಿಯೇ ಇರುತ್ತವೆ.

ದಿನದ ಪ್ರಾರಂಭದಲ್ಲೇ ನೀರಿನ ಕೊರತೆ ಉಂಟಾದರೆ ಬೆಳಗಿನ 10 ಗಂಟೆಯ ವೇಳೆಗೇ ಅವು ಅನಿಲ ವಿನಿಮಯಕ್ಕೆ ಸಹಾಯಕವಾಗುತ್ತವೆ. ಮಧ್ಯಾಹ್ನ ಮುಚ್ಚಿ. ಪುನಃ ಉಷ್ಣತೆ ಅಥವಾ ಬೆಳಕಿನ ತೀವ್ರತೆ ಕಡಿಮೆಯಾದಂತೆ ಮತ್ತೆ ತೆರೆದು ಸಂಜೆಗೆ ಪೂರ್ಣವಾಗಿ ಮುಚ್ಚಿಕೊಳ್ಳುವುದುಂಟು. ನೀರಿನ ಕೊರತೆ ಅತಿಯಾಗಿದ್ದಲ್ಲಿ ಅವು ತೆರೆಯದೇ ಇರಬಹುದು. ಅಥವಾ ಸ್ವಲ್ಪಮಾತ್ರ ತೆರೆದುದಿನ ವಿಡೀ ಹಾಗೆಯೇ ಉಳಿಯಬಹುದು.

ಹಲವು ಪ್ರಭೇದಗಳಲ್ಲಿ ಅಧಿಕ ಉಷ್ಣತೆಯ ಕಾರಣದಿಂದ ರಾತ್ರಿವೇಳೆಯಲ್ಲೂ ಸೂಕ್ಷ್ಮರಂಧ್ರಗಳು ತೆರೆಯಬಲ್ಲವು. ಉಷ್ಣವಲಯದ ಸಸ್ಯಗಳಲ್ಲಿ ಇದು ಸಾಮಾನ್ಯ. ಉತ್ತರ ಶೀತವಲಯ ಪ್ರದೇಶದಲ್ಲಿ ರಾತ್ರಿಕಾಲದಲ್ಲಿ ಕೂಡ ಬೆಳಕು ಇರುವುದರಿಂದ ಇವು ತೆರೆಯುತ್ತವೆ.

ಬಾಷ್ಪ ವಿಸರ್ಜನೆಯ ಕಾರಕಗಳು : ಬಾಷ್ಪ ವಿಸರ್ಜನೆಗೆ ಬೆಳಕು ಅತಿ ಮುಖ್ಯ ಅಂಶ. ಸೂಕ್ಷ್ಮರಂಧ್ರಗಳು ಹಗಲಿನಲ್ಲಿ ಮಾತ್ರ ತೆರೆಯುವುದರಿಂದ ಇದು ಹಗಲಿನಲಿಯೇ ಹೆಚ್ಚು. ರಾತ್ರಿ ಹೊತ್ತು ಹೊರಚರ್ಮದ ಮೂಲಕ ಮಾತ್ರ ಇದು ಜರಗುವುದರಿಂದ ಇದರ ಮೊತ್ತ ಅತ್ಯಲ್ಪ. ಅಲ್ಲದೆ ಬೆಳಕು ಹೆಚ್ಚಿದರೆ ಉಷ್ಣತೆಯೂ ಹೆಚ್ಚಾಗುತ್ತದೆ. ಎಲೆಗಳ ಮೇಲೆ ಬೀಳುವ ಸೂರ್ಯರಶ್ಮಿಯ ನೇರಪ್ರಭಾವದಿಂದ, ಒಳಗಿನ ವಾಯುಬಿಸಿಯಾಗಿ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದ ಎಲೆಯ ಕೋಶ ಮಧ್ಯಪ್ರದೇಶದಲ್ಲಿಯ ವಾಯು ಹೆಚ್ಚು ಬಿಸಿಯಾಗುತ್ತದೆ. ಸುತ್ತಲಿನ ಕೋಶಗಳಲ್ಲಿ ನೀರಿನ ಪೂರೈಕೆ ಸಮರ್ಪಕವಾಗಿದ್ದಲ್ಲಿ ನೀರು ಆವಿಯಾಗಿ ಸೇರಿ ಒಳಗಾಳಿಯಲ್ಲಿನ ಆದ್ರತೆ ಹೆಚ್ಚಾಗುತ್ತದೆ. ಬಿಸಿಲಿನಿಂದ ಹೊರಗಿನ ಗಾಳಿಯಲ್ಲಿ ಒಣ ವಾತಾವರಣ ಏರ್ಪಡುವುದರಿಂದ ಒಳಗಿನ ಆವಿಯ ಒತ್ತಡ ಹೆಚ್ಚಾಗಿ ಆವಿ ಹೊರಹೋಗಲು ಅನುಕೂಲವಾಗುತ್ತದೆ.

ಎಲೆಗಳ ಹೊರಭಾಗದಲ್ಲಿಯೂ ನೀರಿನ ಆದ್ರ್ರತೆ ಹೆಚ್ಚಾಗಿದ್ದು, ಆವಿ ಒತ್ತಡದ ಸಮತೋಲನ ಏರ್ಪಟ್ಟಲ್ಲಿ ಮಾತ್ರ ಹೆಚ್ಚು ಬಾಷ್ಪವಿರ್ಸಜನೆಯಾಗುವುದಿಲ್ಲ. ಉಷ್ಣತೆ ಅತಿಯಾದಲ್ಲಿ ಬಾಷ್ಪವಿಸರ್ಜನೆ ಕಡಿಮೆ ಆಗುತ್ತದೆ.
ಅಂತೆಯೇ ಗಾಳಿ ಹೆಚ್ಚಾಗಿರುವಾಗ ಬಾಷ್ಪವಿಸರ್ಜನೆ ಹೆಚ್ಚು. ರಭಸದಿಂದ ಬೀಸುವ ಗಾಳಿಗಿಂತ ಒಂದೇ ರೀತಿ ಬೀಸುವ ಮಂದಮಾರುತ ಈ ಕಾರ್ಯಕ್ಕೆ ಹೆಚ್ಚು ಸಹಾಯಕ. ಗಾಳಿಯಿಲ್ಲದಿದ್ದಲ್ಲಿ ಎಲೆಗಳ ಸುತ್ತಲಿನ ವಾಯುವಿನಲ್ಲಿ ಆವಿ ವಿಸರ್ಜನೆಯಿಂದ ಆದ್ರ್ರತೆ ಆಧಿಕವಾಗಿ ವಿರ್ಸಜನೆಗೆ ತಡೆಯಾಗುತ್ತದೆ. ಗಾಳಿ ಬೀಸಿದಲ್ಲಿ ಈ ತೇವ ಬೇರೆಡೆಗೆ ಹರಡಿ ಎಲೆಗಳ ನಿರಂತರ ಚಲನೆಯಿಂದಲೂ ಕೊಂಬೆಗಳ ಪೂರ್ಣ ಅಲಗಾಡುವಿಕೆಯಿಂದಲೂ ಬಾಷ್ಪವಿರ್ಸಜನೆ ಅಧಿಕವಾಗುತ್ತದೆ. ಆದರೆ ಗಾಳಿ ಅಧಿಕವಾದರೋ ಅದರ ಒತ್ತಡದಿಂದ ಸೂಕ್ಷ್ಮರಂಧ್ರಗಳು ಮುಚ್ಚಿ ಬಾಷ್ಪವಿಸರ್ಜನೆಯ ದರ ಕಡಿಮೆ ಆಗುತ್ತದೆ.

ಸಸ್ಯಗಳಿಗೆ ಒದಗುವ ನೀರಿನ ಪೂರೈಕೆಗೆ ಯಾವ ಕಾರಣದಿಂದಾದರೂ ತಡೆಉಂಟಾದರೆ ಬಾಷ್ಪವಿಸರ್ಜನೆ ಕಡಿಮೆಯಾಗುತ್ತದೆ. ಉಳಿದ ಕಾರಕಗಳು ಅನುಕೂಲವಾಗಿದ್ದರೂ ನೀರಿನ ಪೂರೈಕೆ ಒದಗದಿದ್ದಲ್ಲಿ ವಿಸರ್ಜನೆ ಬಲುಬೇಗ ನಿಲ್ಲುತ್ತದೆ. ಭೂಮಿಯಲ್ಲಿ ಸಾಕಷ್ಟು ಮೊತ್ತದ ನೀರು, ಉಷ್ಣತೆ, ವಾಯು ಮತ್ತು ಆ ದ್ರಾವಣದಲ್ಲಿ ಕರಗಿರುವ ಲವಣಗಳು ಬಾಷ್ಪ ವಿಸರ್ಜನೆಯ ಮೇಲೆ ಪ್ರಭಾವ ಬೀರಬಲ್ಲವು. ಅವು ಸಮರ್ಪಕವಾಗಿದ್ದಲ್ಲಿ ವಿಸರ್ಜನೆಯ ಪ್ರಮಾಣ ಹೆಚ್ಚುತ್ತದೆ.

ವಾಯುವಿನ ಒತ್ತಡಕೂಡ ಬಾಷ್ಪವಿಸರ್ಜನೆಯ ಮೇಲೆ ಪ್ರಭಾವ ಬೀರುತ್ತದೆ. ಎತ್ತರವಾದ ಬೆಟ್ಟಗಳ ಮೇಲೆ ಬೆಳೆಯುವ ಸಸ್ಯಗಳ ಮೇಲಿರುವುದಕ್ಕಿಂತ ತಗ್ಗು ಪ್ರದೇಶದಲ್ಲಿ ಬೆಳೆಯುವವುಗಳ ಮೇಲಿನ ವಾಯು ಒತ್ತಡ ಹೆಚ್ಚು. ಆದ್ದರಿಂದ ತಗ್ಗು ಪ್ರದೇಶದಲ್ಲಿಯ ಸಸ್ಯಗಳಲ್ಲಿ ಒತ್ತಡ ಹೆಚ್ಚಾಗಿ ಬಾಷ್ಪವಿಸರ್ಜನೆಯೂ ಹೆಚ್ಚುತ್ತದೆ.

ಇಷ್ಟಲ್ಲದೆ ವಿವಿಧ ಜಾತಿ ಪ್ರಭೇದಗಳ ಸಸ್ಯಗಳು ಒಂದೇ ಪರಿಸರದಲ್ಲಿ ಬೆಳೆದರೂ ಅವುಗಳ ಬಾಷ್ಪವಿಸರ್ಜನೆಯ ದರ ಹೆಚ್ಚು ಕಡಿಮೆಯಾಗಿರುತ್ತದೆ. ಸಸ್ಯಗಳ ಬಾಹ್ಯರಚನೆಯೇ ಇದಕ್ಕೆ ಕಾರಣ. ಕೆಲವು ಸಸ್ಯಗಳಲ್ಲಿ ಆಂತರಿಕ ರಚನೆಯನ್ನೂ ಕೋಶ ಮತ್ತು ಜೀವರಸಗಳ ನೀರು ಹೀರುವ ಮತ್ತು ಎಲೆಗಳಲ್ಲಿಯ ಸೂಕ್ಷ್ಮಾಭಿಸರಣ ಸಾಮಥ್ರ್ಯಗಳನ್ನೂ ಗಿಡದಲ್ಲಿಯ ಒಟ್ಟು ಎಲೆಗಳ ವಿಸ್ತೀರ್ಣವನ್ನೂ ಇದು ಅವಲಂಬಿಸಿದೆ. ಒಂದು ಮುಖ್ಯಾಂಶ : ಹೆಚ್ಚು ಎಲೆಗಳಿದ್ದಲ್ಲಿ ವಿಸರ್ಜನೆ ಅಧಿಕ.

ಸಸ್ಯಜೀವನದಲ್ಲಿ ಬಾಷ್ಪವಿಸರ್ಜನೆಯ ಪಾತ್ರ : ಬಾಷ್ಪ ವಿಸರ್ಜನೆಯಿಂದ ನೀರಿನ ಅಧಿಕಾಂಶ ಪೋಲಾಗುತ್ತದಷ್ಟೆ. ಹೀಗೆ ಹೊರಬರುವ ನೀರಿನ ಮೊತ್ತ ಋತುಮಾನಕ್ಕೆ ಮತ್ತು ಬೆಳೆಗಳಿಗೆ ಅನುಸಾರವಾಗಿ ವ್ಯತ್ಯಾಸ ತೋರಬಹುದು. ಆದರೆ ಇದರಿಂದ ಸಸ್ಯಕ್ಕೆ ಅನುಕೂಲವೇ ಪ್ರತಿಕೂಲವೇ ಎಂದು ನಿಖರವಾಗಿ ಹೇಳಲುಬಾರದು. ಇದು ಅನಿವಾಯ್ರ್ಯವಾದ ಕೇಡೆಂದೂ ಇದರಿಂದ ಗಿಡಕ್ಕೆ ಯಾವೊಂದೂ ಪ್ರಯೋಜನವೂ ಇಲ್ಲವೆಂದೂ ಹಲವರ ವಾದ.

ಇನ್ನು ಕೆಲವರು ಸಸ್ಯಜೀವನದ ಜೀವಕ್ರಿಯೆಗಳಿಗೆ ಇದು ಅಗತ್ಯವಾದದ್ದೆಂದು ನಂಬಿದ್ದಾರೆ. ಬಾಷ್ಪ ವಿಸರ್ಜನೆಯಿಂದ ಸಸ್ಯಗಳಿಗೆ ಒದಗುವ ಅನುಕೂಲಗಳೇ ಈ ವಾದಕ್ಕೆ ಆಧಾರ. ಈ ಅನುಕೂಲಗಳಲ್ಲಿ ನೀರಿನ ಚಲನೆ ಮುಖ್ಯವಾದ್ದು. ಜೀವಕೋಶಗಳ ದೃಢತೆಗೆ ಮತ್ತು ಕಾರ್ಯನಿರ್ವಹಣೆಗೆ ನೀರು ಆವಶ್ಯಕ. ಎಲೆಯಲ್ಲಿಯ ಕೋಶಗಳ ತೇವವಾದ ಪೊರೆಯಿಂದಲೇ ಕಾರ್ಬನ್ ಡೈ ಆಕ್ಸೈಡನ್ನು ಸಸ್ಯದ ಹರಿತ್ತು ಉಪಯೋಗಿಸಿಕೊಂಡು ದ್ಯುತಿಸಂಶ್ಲೇಷಣಕ್ಕೆ ಸಹಾಯಕವಾಗುವುದು. ಸಸ್ಯ ಜೀವನವಿರುವತನಕವೂ ಕಾರ್ಬನ್ ಡೈ ಆಕ್ಸೈಡಿನ ವಿನಿಮಯ ಅಗತ್ಯ. ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗಿ ಒದಗುವುದು ಸೂಕ್ಷ್ಮ ರಂಧ್ರದ ಮುಖಾಂತರವೇ. ಸೂಕ್ಷ್ಮರಂಧ್ರಗಳು ತೆರೆದಿರುವಾಗ ಆಗುವ ಬಾಷ್ಪವಿಸರ್ಜನೆ ಒಂದು ದುಷ್ಫಲ; ಅಷ್ಟೆ. ಇದನ್ನು ತಡೆಗಟ್ಟಲು ಸಾಧ್ಯವಿಲ್ಲ.
ಹಾಗೆಯೇ ಭೂಮಿಯಲ್ಲಿಯ ಲವಣಾಂಶಗಳನ್ನು ಹೆಚ್ಚಾಗಿ ಹೀರಲು ಈ ಕಾರ್ಯ ಸಹಾಯಕವೆಂದು ವಾದಿಸಲಾಗಿದೆ. ಆದರೆ ನೀರಿನಲ್ಲಿ ವಿಲೀನವಾಗಿರುವ ಲವಣಾಂಶಗಳನ್ನು ಬೇರು ಹೀರಿ ಹರಿಸುತ್ತದೆ.  ನಿರಂತರವಾಗಿ, ಬಾಷ್ಪವಿಸರ್ಜನೆಯಾಗದಿರುವಾಗ ಸಹ ಇದು ನಡೆಯುತ್ತದೆ. ಅಲ್ಲದೆ ಬಾಷ್ಪ ವಿಸರ್ಜನೆ ಸಮರ್ಪಕವಾಗಿರದಿದ್ದಲ್ಲಿ ಲವಣಾಂಶಗಳ ವಿಸûರಣೆ ಸರಿಯಾಗಿ ಜರಗುವುದಿಲ್ಲವೆಂಬ ಹೇಳಿಕೆ ಆಧಾರ ರಹಿತವಾದ್ದು.

ಎಲೆಗಳಲ್ಲೂ ಇತರ ಸಸ್ಯಭಾಗಗಳಲ್ಲೂ ಉಸಿರಾಟದಿಂದ ಉತ್ಪನ್ನವಾಗುವ ಹೆಚ್ಚು ಉಷ್ಣವನ್ನು ಹೊರದೂಡಲು ಬಾಷ್ಪ ವಿಸರ್ಜನೆ ಸಹಾಯಕವೆಂಬುದು ಮೂರನೆಯ ಅನುಕೂಲ. ಇದು ಕೂಡ ನಿಜವಲ್ಲ. ಉಷ್ಣಗೆ ಹೆಚ್ಚಾದಲ್ಲಿ ಇತರ ಜೀವಿಗಳಂತೆಯೇ ಅದನ್ನು ವಿವಿಧ ರೂಪದಲ್ಲಿ ಕಳೆದುಕೊಳ್ಳಲು ಸಸ್ಯಗಳಿಗೆ ಸಾಧ್ಯವಿದೆ.

ಕೆಲವು ಸಂದರ್ಭಗಳಲ್ಲಿ ಬಾಷ್ಪ ವಿಸರ್ಜನೆಯಿಂದ ಸಸ್ಯಗಳಿಗೆ ಕೆಡಕುಂಟಾಗಬಹುದು. ಭೂಮಿಯಲ್ಲಿ ನೀರಿನ ಅಭಾವವಿದ್ದಾಗ, ಹೆಚ್ಚಿನ ಉಷ್ಣತೆಯಿಂದ ಬಾಷ್ಪವಿಸರ್ಜನೆ ಹೆಚ್ಚಾದಲ್ಲಿ ಜೀವಕೋಶಗಳ ಉಬ್ಬುವಿಕೆಯಿಲ್ಲದೆ ಅವುಗಳ ದ್ಯುತಿ ಸಂಶ್ಲೇಷಣ ಕ್ರಿಯೆ ಸಮರ್ಪಕವಾಗಿ ನೆರವೇರಲಾರದು. ಸಸ್ಯಜೀವನದಲ್ಲಿ ಇತರ ಎಲ್ಲ ಅಂಶಗಳಿಗಿಂತ ನೀರು ಅತಿ ಮುಖ್ಯವಾದರೂ ಬಾಷ್ಪ ವಿಸರ್ಜನೆ ಅದನ್ನು ಒದಗಿಸುವ ಮಾರ್ಗ ಎನ್ನುವುದು ಸರಿಯಾದ ಊಹೆಯಲ್ಲ.

ಇದರಿಂದ ಬಾಷ್ಪವಿಸರ್ಜನೆ ಸಸ್ಯಜೀವನಕ್ಕೆ ಅತ್ಯಾವಶ್ಯಕವಲ್ಲದೆ ಕೆಲವು ಅಂಶಗಳಲ್ಲಿ ಸಹಾಯಕವಾಗಬಲ್ಲ ಒಂದು ನೈಸರ್ಗಿಕ ಕ್ರಿಯೆ ಎಂದು ಮಾತ್ರ ಭಾವಿಸಬಹುದು.		

(ಜಿ.ವಿ.ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ